ಅಪಲೇಷಿಯನ್ ಪರ್ವತಗಳು
	
ಸಂಯುಕ್ತ ಸಂಸ್ಥಾನದ ಪೂರ್ವ ಭಾಗದಲ್ಲಿ ಅತಿಜಟಿಲವಾಗಿ ಹೆಣೆದುಕೊಂಡಿರುವ, ತಗ್ಗಾದ, ಗುಂಡು ಆಕೃತಿಯ ಪರ್ವತಶ್ರೇಣಿಗಳ ಮತ್ತು ವಿಚ್ಛೇದಿತ ಪ್ರಸ್ಥಭೂಮಿಗಳ ಪ್ರದೇಶ. ಇದು ಅಟ್ಲಾಂಟಿಕ್ ಸಮುದ್ರತೀರಕ್ಕೆ ಸಮನಾಂತರವಾಗಿ ಈಶಾನ್ಯದಲ್ಲಿ ಅಲಬಾಮದಿಂದ ನ್ಯೂ ಇಂಗ್ಲೆಂಡಿನವರೆಗೆ 1500 ಮೈ. ಹಬ್ಬಿ ಕ್ವಿಬೆಕ್ಕಿನಲ್ಲಿ 100-250 ಮೈ. ಪ್ರವೇಶಿಸಿದೆ. ಪ್ರಾಚೀನಕಾಲದಲ್ಲಿ ಈ ಪ್ರದೇಶವನ್ನಾವರಿಸಿದ್ದ ಅರಣ್ಯ ಈಗ ವಿರಳವಾಗಿದೆ. ಪಶ್ಚಿಮದ ರಾಕಿ ಪರ್ವತಶ್ರೇಣಿಗಳಷ್ಟೇ ಇವು ಭವ್ಯವಾಗಿವೆ. ಪರ್ವತಗಳ ಎತ್ತರ 3000'-5000'. ದಕ್ಷಿಣ ಅಪಲೇಷಿಯನ್ ಶ್ರೇಣಿಗಳಲ್ಲಿ ಮುಖ್ಯವಾದ ಅತ್ಯುನ್ನತ ಶ್ರೇಣಿಗಳೆಂದರೆ ಜಾರ್ಜಿಯ ಮತ್ತು ಉತ್ತರ ಕೆರೊಲಿನಾದ ಬ್ಲೂರಿಡ್ಜ್ ಪರ್ವತಗಳು, ಟೆನ್ನೆಸಿ ಮತ್ತು ಉತ್ತರ ಕೆರೊಲಿನಾದ ದಿ ಗ್ರೇಟ್ ಸ್ಮೋಕಿ ಪರ್ವತಗಳು ಮತ್ತು ಟೆನ್ನೆಸಿ ಮತ್ತು ಕೆಂಟಿಕಿಯಲ್ಲಿನ ಕಂಬರ್ ಲೆಂಡ್ ಪರ್ವತಗಳು. ಮಧ್ಯದ ಅಪಲೇಷಿಯನ್ ಪರ್ವತಗಳಲ್ಲಿ ವರ್ಜಿನಿಯ ಬ್ಲೂರಿಡ್ಜ್ ಪರ್ವತಗಳು ಮತ್ತು ವರ್ಜಿನಿಯಗಳು ಮೇರಿಲ್ಯಾಂಡ್ ಮತ್ತು ಪೆನ್ಸಿಲ್ವೇನಿಯಗಳ ಅಲೆಘನಿ ಪರ್ವತಗಳು ಸೇರಿವೆ. ಉತ್ತರದ ಅಪಲೇಷಿಯನ್ ಪರ್ವತಗಳಲ್ಲಿ ನ್ಯೂಯಾರ್ಕಿನಲ್ಲಿರುವ ಕಾಟ್ಸ್ ಕಿಲ್ ಮತ್ತು ಆಡಿರೊಂಡಾಕ್ ಪರ್ವತಗಳು, ವರ್ ಮಾಂಟ್ ನಲ್ಲಿರುವ ಗ್ರೀನ್ ಪರ್ವತಗಳು ಮತ್ತು ನ್ಯೂ ಹಾಂಪ್‍ಷೈರ್‍ನಲ್ಲಿರುವ ವೈಟ್ ಪರ್ವತಗಳು ಸೇರಿವೆ. ಅಪಲೇಷಿಯನ್ ಪರ್ವತಗಳಲ್ಲಿ ಅತ್ಯುನ್ನತ ಶಿಖರಗಳೆಂದರೆ ದಿ ಗ್ರೇಟ್ ಸ್ಮೋಕಿ ಪರ್ವತದ ಮೌಂಟ್ ಮಿಚ್ಚೆಲ್ (6,654'), ಮತ್ತು ಬ್ಲೂರಿಡ್ಜ್ ಪರ್ವತದ ಕ್ಲಿಂಗ್ ಮನ್ಸ್ ಡೋಮ್ (6,642'). ಇವೆರಡೂ ಉತ್ತರ ಕೆರೊಲಿನಾದಲ್ಲಿವೆ. ಉತ್ತರದ ವೈಟ್ ಪರ್ವತದಲ್ಲಿರುವ ಮೌಂಟ್ ವಾಷಿಂಗ್‍ಟನ್ 6,288' ಎತ್ತರವಿದೆ.
	
ನೈಋತ್ಯದಿಂದ ಈಶಾನ್ಯಕ್ಕೆ ಹಬ್ಬಿರುವ ಶ್ರೇಣಿಗಳ ಮಧ್ಯೆ ಮಧ್ಯೆ ಇರುವ ಕಣಿವೆಗಳಲ್ಲಿ ವರ್ಜಿನಿಯ ಕೆಂಟುಕೆ ಪ್ರದೇಶದ ಕಂಬರ್‍ಲೆಂಡ್ ಕಣಿವೆ. ಪೆನ್ಸಿಲ್ವೇನಿಯದ ಡಿಲಾವರ್ಡ್ ಕಣಿವೆ ಮತ್ತು ನ್ಯೂಯಾರ್ಕ್‍ನಲ್ಲಿನ ಮೋಹಕ್-ಹಡ್ಸನ್ ಕಣಿವೆಗಳು ಮುಖ್ಯವಾದುವು. ಮೊದಲು ಅಮೆರಿಕಕ್ಕೆ ವಲಸೆ ಬಂದು ಇಲ್ಲಿ ನೆಲೆಸಿದವರು ಪಶ್ಚಿಮಕ್ಕೆ ಹರಡದಂತೆ ಈ ಪರ್ವತ ಶ್ರೇಣಿಗಳು ತಡೆದಿದ್ದುವು. ಆದರೆ ಈಗಿನ ತೀವ್ರಗತಿಯ ವಾಹನಗಳಲ್ಲಿ ಯಾವ ಯಾವ ಭಾಗಕ್ಕಾದರೂ ಪ್ರಯಾಣ ಮಾಡಬಹುದಾಗಿರುವುದರಿಂದ ಈ ಪರ್ವತಗಳಿಂದ ಪ್ರಯಾಣ ಹಾಗೂ ಸಾಗಾಣಿಕೆಗೆ ಯಾವ ಅಡಚಣೆಗಳೂ ಇಲ್ಲ.   			
 
(ಸಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ